ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದ ವಿಷಯಾಂತರಗಳ ಒಂದು ಪ್ರವರ

ಲೇಖಕರು :
ರಾಜ್ ಕುಮಾರ್
ಗುರುವಾರ, ಜನವರಿ 30 , 2014

ಯಕ್ಷಗಾನ ಅಸ್ವಾದನೆಯೂ ಒಂದು ವಿದ್ಯೆ ಎಂದು ಹಲವು ಸಲ ಅನ್ನಿಸಿದ್ದಿದೆ. ಯಕ್ಷಗಾನದಲ್ಲಿ ಬಹು ಮುಖೀ ರಂಜನೆ ಇದೆಯೇನೋ ಸತ್ಯ. ನಾಟ್ಯ ಗಾಯನ ನಾಟಕೀಯತೆಯಂತೆ, ವಿನೋದ ಭಾವುಕ ಅದರ ಜತೆಗೆ ಚಿಂತನೆ ರಂಜನೆ ಯಕ್ಷಗಾನವನ್ನು ಪರಿಪಕ್ವ ಕಲೆಯ ಶಿಖರವನ್ನಾಗಿಸಿದೆ. ಆದರೂ ಇಂತಹ ಕಲೆಯ ಅಸ್ವಾದನೆ ತಿಳಿಯದೇ ಇದ್ದಲ್ಲಿ ಆ ಪರಿಪಕ್ವತೆ ಅಪೂರ್ಣವೆಂದೇ ಅನಿಸಲ್ಪಡುತ್ತದೆ. ಮಿತ್ರರೊಬ್ಬರು, ಇವರು ಮಿತ್ರವರ್ಗಕ್ಕೆ ತನ್ನನ್ನು ತಾನು ಸೇರಿಸಿಕೊಂಡವರು ಎಂದರೂ ಸೂಕ್ತ, ಅವರು ಕರೆ ಮಾಡಿ ನಿತ್ಯವು ನನ್ನಿಂದ ಸಿಗುವ ಯಕ್ಷಗಾನ ಪದಗಳ ಬಗ್ಗೆ ಮಾತನಾಡತೊಡಗಿದರು. ಎಂದೋ ಮರೆತು ಹೋಗಿದ್ದ ಮಂಡೆಚ್ಚ, ಕಡತೋಕರ ಸ್ವರವನ್ನು ಕೇಳಿದಾಗ ತಮ್ಮ ಬಾಲ್ಯದ ದಿನಗಳನ್ನು ನೆನಸಿಕೊಂಡರು.

ಅಂತಹ ಮಹಾನ್ ಕಲಾವಿದರು ಮರೆವಿನ ಪರದೆಯೊಳಗೆ ಮರೆಯಾದರೆಂದರೆ ಅದು ಅವರಿಗೆ ಪ್ರಾಪ್ತವಾದ ಜೀವನ ಶೈಲಿ ಕಾರಣ. ಆದರೆ ನಿಯಮಿತವಾಗಿ ಬರುತ್ತಿದ್ದ ಈ ಕಲಾವಿದರ ಕಂಠನಾದ ಆ ಪರದೆಯನ್ನು ಸ್ವಲ್ಪ ಸ್ವಲ್ಪವಾಗಿ ಸರಿಸಿತು ಎನ್ನಬಹುದು. ಕರೆ ಮಾಡಿದವರೇ ಮೂವತ್ತಕ್ಕೂ ವರ್ಷ ಯಕ್ಷಗಾನದಿಂದ ದೂರಾಗಿ ಮರೆತು ಹೋದಂತಾದ ಜೀವನ ಶೈಲಿ ಈ ಪದಗಳ ಅಸ್ವಾದನೆಯಿಂದ ಮತ್ತೆ ನೆನಪಿಗೆ ಬಂದುದನ್ನು ಹೇಳಿದರು. ಯಕ್ಷಗಾನ ಎಂದರೆ ಬಣ್ಣದ ಬಣ್ಣದ ವೇಷ, ರಾಳದ ಎರಚಾಟದಿಂದ ಮುಗಿಲೆತ್ತರಕ್ಕೆ ಚಿಮ್ಮುವ ಬಡಬಾಗ್ನಿ ಮೈಕ್ ಇಲ್ಲದೇಯೂ ಮೈಲು ದೂರ ರಾತ್ರಿಯ ನೀರವತೆಯಲ್ಲಿ ಕೇಳುತ್ತಿದ್ದ ಚೆಂಡೆ ಪಟ್ಟುಗಳು, ಗಡ ಗಡ ನಡುಗುವ ಚಳಿಯಲ್ಲಿ ಬಯಲಾಟದ ಗದ್ದೆಯಲ್ಲಿ ಕೇವಲ ಕಣ್ಣನ್ನು ಮಾತ್ರ ಹೊರಗಿಟ್ಟು ದೇಹವೆಲ್ಲವನ್ನೂ ಮಂದ್ರಿಯ ಒಳಗಿಟ್ಟು, ಮುಸುಕು ಹೊದ್ದು ಕೌತುಕದಿಂದ ನೋಡುತ್ತಿದ್ದ ಆಟಗಳು ಹೀಗೆ ಆ ನೆನಪುಗಳನ್ನು ಹಂಚಿಕೊಂಡರು. ಬಹಳ ಸಮಯದ ವಾನಪ್ರಸ್ಥದಿಂದ ಮೋಕ್ಷ ಹೊಂದಿ ಅರಮನೆಗೆ ಬಂದಂತೆ ಪುನಃ ಅವರಿಗೆ ಯಕ್ಷಲೋಕ ದರ್ಶನ ರವಾನೆಯಾಗುತ್ತಿದ್ದ ನಿತ್ಯ ಪದಗಳ ಮೂಲಕ ಅಗತೊಡಗಿತು !!! ಕೇವಲ ಒಂದೊಂದು ನಿಮಿಷದ ಪದಗಳು ಯಕ್ಷಲೋಕದ ದರ್ಶನ ಮಾಡಬೇಕೆಂದರೆ ಯಕ್ಷಗಾನದ ಆ ಜೀವನಾಡಿ ಮತ್ತು ಅದರ ಮಿಡಿತ ಎಂಥಾದ್ದಾಗಿರಬೇಡ.?

ಬಯಲಾಟದ ಪ್ರೇಕ್ಷಕರು
ಹಳೆಯ ಯಕ್ಷಗಾನದ ಆಟಗಳ ಬಗ್ಗೆ ವೇಷ ವೈಭವದ ಬಗ್ಗೆ ಹೇಳುವಾಗ ನಾನು ಹೇಳಿದೆ “ಯಕ್ಷಗಾನ ಎಂದರೆ ಕೇವಲ ಅಷ್ಟು ಮಾತ್ರವಲ್ಲ. ಝಗ ಝಗಿಸುವ ವೇಷ, ದಿಗಿಣ, ಅಟ್ಟ ಹಾಸ ಇಷ್ಟನ್ನು ಮಾತ್ರ ಯಕ್ಷಗಾನ ಎಂದು ತಿಳಿದುಕೊಂಡರೆ ನೀವಿನ್ನೂ ಯಕ್ಷಗಾನ ಬಯಲಿನ ತುತ್ತತುದಿಯಲ್ಲಿ ಇದ್ದೀರೆಂದೇ ಅರ್ಥ.” ಹೌದಲ್ಲ? ಇಷ್ಟನ್ನೇ ಯಕ್ಷಗಾನ ಎಂದು ಸೀಮಿತಗೊಳಿಸಿದರೆ ಅದು ಯಕ್ಷಗಾನ ಅಸ್ವಾದನೆಯ ವೈಫಲ್ಯ ಅಂತಲೇ ಹೆಳಬಹುದು. ಈ ಮಿತ್ರ ವ್ಯಕ್ತಿಯ ಅನುಭವ ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿಯ ಪ್ರತಿಬಿಂಬದ ಹಾಗೆ ಕಂಡಿತು.

ಇಷ್ಟರಲ್ಲೇ ಯಕ್ಷಚಿಂತನದ ಪುಟಗಳತ್ತ ಅವರ ಗಮನ ಹರಿಯಿತು. ನಾನು ನಿಜಕ್ಕೂ ಕೆಲವೊಂದು ಲೇಖನ ಉಲ್ಲೇಖಿಸಿ ಪ್ರತಿಕ್ರಿಯೆ ಕೇಳಿದ್ದೆ. ಹಾಗಾಗಿ ಯಕ್ಷಚಿಂತನದ ಕೆಲವು ಲೇಖನಗಳನ್ನು ಓದಿ ಅವರು ಈಗಿನ ಕರೆಮಾಡಿದ್ದರು. ಅದರಲ್ಲೂ ಗೀತೋಪದೇಶದ ಬಗ್ಗೆ ಬರೆದ ಲೇಖನ ಮಾಲೆಯ ಬಗ್ಗೆ ಬಹಳ ಪ್ರಭಾವಿತರಂತೆ ಮಾತನಾಡತೊಡಗಿದರು. ಕಲ್ಪನೆಯ ಬಣ್ಣದವೇಷಗಳು ಚೌಕಿಯಲ್ಲಿ ವಿಶ್ರಾಂತಿಗೆ ಜಾರಿಕೊಂಡ ಅನುಭವ, ಅವರಿಗೂ ಕೌತುಕ ಯಕ್ಷಗಾನದಲ್ಲಿ ಈ ಬಗೆಯ ವೈಚಾರಿಕ ಜಿಜ್ಞಾಸೆ ಉಂಟೇ? ಈ ಜಿಜ್ಞಾಸೆಯ ಶೋಧನೆ ಅವರಿಗೆ ಆಶ್ಚರ್ಯವನ್ನು ತಂದಿತ್ತು. ಇದು ಯಕ್ಷಚಿಂತನದ ಹಿರಿಮೆ ಅಂತ ಅನ್ನಿಸುವುದಿಲ್ಲ ಯಾಕೆಂದರೆ ನಾ ಬರೆದ ಲೇಖನ ಅದು ಪರ್ಯಾಪ್ತವಾಗುವುದಕ್ಕೆ ಸಾಧ್ಯವೇ ಇಲ್ಲ. ಯಕ್ಷಗಾನದ ರೆಂಬೆಗಳನ್ನು ಹಿಡಿದಷ್ಟು ಅಲ್ಲಿ ಹಣ್ಣುಗಳ ಗೊಂಚಲು ಸಿಗುತ್ತದೆ. ತಾಳ ಮದ್ದಲೆ ಎಂಬುದು ಯಕ್ಷಗಾನದ ಒಂದು ರೆಂಬೆ. ಅದರ ಕವಲಿನ ಕವಲಾಗಿ ಹೋದದ್ದು ನನ್ನ ಲೇಖನ. ಆದರೂ ಇಂದು ಗಮನಿಸುವಾಗ ಚಿರ ಪರಿಚಿತ ಕಲೆ ಬಹಳಷ್ಟು ಅಪರಿಚಿತವಾಗಿಯೇ ಉಳಿದಿದೆ. ಯಕ್ಷಗಾನದ ಕೆಲವೊಂದು ಅಂಗ ಮಾತ್ರ ಜನಪ್ರಿಯವಾಗಿದೆ ಎಂದನಿಸುತ್ತದೆ.

ಇಂದು ಯಕ್ಷಗಾನದ ಬಗ್ಗೆ ತಿಳಿಯಬೇಕೆಂದು ಇರುವ ಕುತೂಹಲ ಮನಸ್ಸಿಗರಿಗೆ ದೇವಿ ಮಹಾತ್ಮೆಯ ಮಹಿಷಾಸುರ ತೋರಿಸಿ ಇದು ಯಕ್ಷಗಾನ, ಕರ್ನಾಟಕದ ರಾಜ ಕಲೆ ಎಂದು ಹೇಳಿದರೆ ಯಾವುದನ್ನು ಗ್ರಹಿಸಬೇಕು? ಅಸುರ ಸಂಹಾರ.. ಎಂಬ ಪ್ರಹಸನ ಎಂದಷ್ಟೇ ತಿಳಿಯಬೇಕು. ಇಂತಹ ಪ್ರಾಕಾರಗಳು ಉತ್ತರ ಭಾರತದ ಹಲವು ಕಡೆಯಲ್ಲಿ ಬೇರೆ ಬೇರೆ ರೂಪದಲ್ಲಿ ಪ್ರದರ್ಶಿಸುತ್ತಾರೆ. ಉತ್ತರ ಭಾರತದಲ್ಲೇ ಏಕೆ, ಯಕ್ಷಗಾನ ಪ್ರಚಲಿತದಲ್ಲಿ ಇರುವ ಕರ್ನಾಟಕದ ಕರಾವಳಿ ಪ್ರದೇಶಗಳ ಭೂತಾರಾಧನೆಯಲ್ಲಿಯೂ ಇಂತಹ ಹಲವು ರೂಪಗಳನ್ನು ಕಾಣಬಹುದು.

ದೇವಿ ಮಹಾತ್ಮೆಯ ಮಹಿಷಾಸುರ
(ಚಿತ್ರ ಕೃಪೆ : ನಾಗೇಶ್ ಆಚಾರ್ಯ, ಕೆ.ಎಸ್)
ನಮ್ಮಜ್ಜ ಹೇಳುತ್ತಿದ್ದ ಮಾತು ಈಗಲೂ ಜ್ಜಾಪಕಕ್ಕೆ ಬರುತ್ತದೆ.. ಕಟೀಲು ಮೇಳದ ದೇವಿ ಮಹಾತ್ಮೆ ನೋಡಿ ಬಂದು ಅವರು ಹೇಳುತ್ತಿದ್ದರು..ಭೂತಕೋಲಕ್ಕೆ ಹೋಗಿ ಬಂದೆ ಎಂದು... ಇದು ಆ ಪ್ರದರ್ಶನದ ಬಗ್ಗೆ ಅವರಿಗೆ ಇದ್ದ ಸಹಜ ಪ್ರತಿಕ್ರಿಯೆ. ಹಾಗೆಂದು ಅದರಲ್ಲಿ ಸತ್ವ ಇಲ್ಲವೆಂದಲ್ಲ.. ಆದರೆ ಯಕ್ಷಗಾನ ಎಂದರೆ ಅಷ್ಟೆ ಎಂಬ ಪರಿಮಿತಿ ನಿರ್ಮಾಣವಾಗಬಾರದಲ್ಲ? ಅದರಲ್ಲೂ ಈಗ ಮಡಿಸಿಟ್ಟ ಕಂಬಳಿಯಂತೆ ಮತ್ತದನ್ನೇ ಬದಲಾವಣೆ ಇಲ್ಲದೆ ಹೊದ್ದುಕೊಳ್ಳುವ ಪ್ರಕ್ರಿಯೆ ಮೇಳಗಳಲ್ಲೂ ರೂಢಿಯಲ್ಲಿರುವಾಗ ಯಕ್ಷಗಾನ ಆಸ್ವಾದನೆ ಎಂಬುದು ಒಂದು ಸವಾಲಿನಂತೆ ಆಗಿಬಿಡುವ ಅನುಮಾನವಾಗುತ್ತದೆ. ವಾರದಲ್ಲಿ ಐದು ದಿನವೂ ಹರಿಕೆಯಾಟವಾಗಿ ದೇವಿ ಪ್ರತ್ಯಕ್ಷವಾಗುವಾಗ ಅಲ್ಲಿ ಯಕ್ಷಗಾನವನ್ನು ಮಾತ್ರ ಮಾತಾಡುವುದು ಸೂಕ್ತವಾಗುವುದಿಲ್ಲ. ಹೊಟ್ಟೆಪಾಡು ಜತೆಯಾದಾಗ ಕಂಬಳಿ ಯಾವುದಾದರೇನು ಚಳಿ ದೂರವಾದರೆ ಸಾಕು ಎಂದು ತಿಳಿಯಬೇಕಷ್ಟೆ.

ಯಾವುದೇ ಒಂದು ಪಾತ್ರ ಮೈದಳೆಯುವಾಗ ಅದರ ಮೂಲ ತಂತು ಒಂದೇ ಆಗಿರುತ್ತದೆ. ಅದು ರಾವಣನೋ ಭೀಮನೋ ಕೌರವನೋ ಆಗಿರಬಹುದು. ಭಾವವೂ ಒಂದೇ ಆಗಿದ್ದರೂ ಅದು ಪ್ರಕಟವಾಗುವ ವಿಭಿನ್ನತೆ ಆಸಕ್ತಿದಾಯಕವಾಗಿರುತ್ತದೆ. ಭೀಷ್ಮನ ಹಿತೋಪದೇಶಕ್ಕೆ ಗಟ್ಟಿ ಚರ್ಮವಾಗುವ ಕೌರವ ತನ್ನ ಹಟಮಾರಿತನವನ್ನು ಪ್ರತಿಪಾದಿಸುವ ರೀತಿ ಭಿನ್ನವಾಗಿರಬಹುದು, ಕೌರವನ ಕುತರ್ಕಕ್ಕೆ ತರ್ಕಿಸುವ ಭೀಷ್ಮ ತತ್ವಗಳನ್ನು ತೆರೆದಿಡುವ ಪರಿ ವಿಭಿನ್ನವಾಗಿರಬಹುದು. ಇದರ ವಿಭಿನ್ನತೆ ಅರಿವಾಗಬೇಕಾದರೆ ಪಾತ್ರಗಳ ಹಿಂದು ಮುಂದು ಅರಿತರೆ ಸಾಲದು, ಅದನ್ನು ನಿರ್ವಹಿಸುವ ಕಲಾವಿದನ ಜಾಣ್ಮೆಯನ್ನೂ ಅವಲೋಕಿಸಬೇಕು. ಯಕ್ಷ ಚದುರಂಗದಲ್ಲಿ ಕಲಾವಿದನ ನಡೆಯೂ ಗಮನಾರ್ಹವಾಗಿಬಿಡುತ್ತದೆ.

ಗೋವಿಂದಣ್ಣ ಗಧಾಯುದ್ದದ ಕೌರವ ಒಂದೇ ಸ್ಥಳದಲ್ಲಿ ಹತ್ತು ಸಲ ನಿರ್ವಹಿಸುವಾಗ ಅವರೊಳಗಿನ ತುಡಿತ ಎಂಥಾದ್ದಾಗಿರಬಹುದು? ಅದನ್ನು ಗಮನಿಸದೇ “ ಕಪಟ ನಾಟಕ ರಂಗ....” ಎಂಬ ಪದಕ್ಕೆ ಮಾತ್ರ ರಂಗಸ್ಥಳ ಇಣುಕಿ, ಸಿಳ್ಳೆ ಹೊಡೆದರೆ ಕಲಾವಿದನ ಶ್ರಮ ಸಾರ್ಥಕವಾಗುವುದಾದರೂ ಹೇಗೆ?

ಹೀಗಿದ್ದರೂ ವ್ಯವಸಾಯೀ ಮೇಳಗಳ ಆಟಗಳು ಚರ್ವಿತ ಚರ್ವಣವಾಗಿ ತಿರುಗಿಸಿದ ಬುಗುರಿಯನ್ನೇ ಪುನಃ ತಿರುಗಿಸುವಂತೆ ಅದೇ ಪುನರಾವರ್ತಿತ ವೇಷಗಾರಿಕೆ ಸಂಭಾಷಣೆಗಳಿಂದ ಪ್ರದರ್ಶಿಸಲ್ಪಡುತ್ತವೆ. ಸಂಬಂಧಿಸಿದವರಲ್ಲಿ ಇದನ್ನು ಪ್ರಸ್ತಾಪಿಸಿದರೂ ಒಂದೆರಡು ಉತ್ತಮ ಸ್ಪಂದನೆಯ ಹೊರತು ಮಿಕ್ಕೆಲ್ಲ ಔದಾಸಿನ್ಯದ ಪ್ರತಿಕ್ರಿಯೆಯೇ ಆಗಿರುತ್ತದೆ. ಒಂದು ಮೇಳದ ಒಂದೇ ಪ್ರಸಂಗವನ್ನು ಮೊದಲ ಎರಡು ಪ್ರದರ್ಶನ ನೋಡಿದರೆ ಮೂರನೆಯದ್ದನ್ನು ನೋಡುವ ಮನಸ್ಸಾಗುವುದಿಲ್ಲ. ಆದರೂ ಮತ್ತದನ್ನೇ ನೋಡುವ ಅಭಿಮಾನಿಗಳೂ ಬಹಳಷ್ಟು ಮಂದಿ ಇದ್ದಾರೆ. ಇದೂ ಯಕ್ಷಗಾನದ ಆಕರ್ಷಣೆಗಳಲ್ಲಿ ಒಂದು ಎನ್ನಬಹುದು.

ಇಂದು ಯಕ್ಷಗಾನ ಹೇಗೆ ಪರಿಚಯಾತ್ಮಕವಾಗಿ ಬಿಂಬಿಸಲ್ಪಡಬೇಕೋ ಆ ರೀತಿಯಲ್ಲಿ ಬಿಂಬಿಸಲ್ಪಡುವುದಿಲ್ಲ. ಆದರ ಅಂತರಾಳದ ಆಳ ಅಗಲವನ್ನು ತಿಳಿಸುವ ಪ್ರಯತ್ನವಾಗಬೇಕು. ಯಕ್ಷಗಾನ ಪ್ರದರ್ಶನ ಮಾತ್ರದಲ್ಲೆ ಜನಪ್ರಿಯವಾಗುತ್ತದೆ ಎಂಬುದು ವಿಶ್ವಸನೀಯವಲ್ಲ. ಬದಲಾಗಿ ಅದರ ವೈವಿಧ್ಯತೆಯ ದರ್ಶನವಾಗಬೇಕು. ತಾಳ ಮದ್ದಲೆಗೆ ಬಂದರೆ ಅದರ ಅಂಗ ಅಂಗಗಳಲ್ಲಿ ಹುಗಿದಿರುವ ಕಲಾಪ್ರಜ್ಞೆ ಪ್ರಕಾಶಗೊಳ್ಳಬೇಕು. ಕೇವಲ ಮಾತುಗಾರಿಕೆಯಲ್ಲೇ ಸಾಕ್ಷಾತ್ಕಾರವಾಗುವ ಪೌರಾಣಿಕ ದರ್ಶನದ ವೈಶಿಷ್ಟ್ಯ ಅರಿವಾಗಬೇಕು. ಬಯಲಾಟದಲ್ಲಿ ವೇಷಗಾರಿಕೆಯ ವೈವಿಧ್ಯದ ಜತೆಗೆ ಹಿಮ್ಮೇಳದ ವೈವಿಧ್ಯ ಮಾತ್ರವಲ್ಲ ಅದರ ಮಟ್ಟುಗಳು ಹೀಗೆ ವಿಪುಲವಾದ ಅಂಗಗಳ ಅರಿವು ಸುಲಭದಲ್ಲಿ ಸಿಗುವಂತಾಗಬೇಕು.

ತೆ೦ಕುತಿಟ್ಟಿನ ದೇವೇ೦ದ್ರನ ವೇಷ
ಯಕ್ಷಗಾನದ ದೇವೇಂದ್ರನ ವೇಷ ಕಂಡವರೊಬ್ಬರು ಹೇಳಿದ್ದರು, ದೇವೆಂದ್ರನಿಗೆ ಮೀಸೆ ಏಕೆ? ವಾಸ್ತವದಲ್ಲಿ ದೇವತೆಗಳಿಗೆ ಮೀಸೆ ಇರುವುದೇ ಇಲ್ಲ. ನಾಟಕ ಸಿನಿಮಾದ ಅನುಭವದಿಂದ ಅವರು ಹಾಗೆ ಹೇಳಿದ್ದರೂ ಯಕ್ಷಗಾನದ ದೇವೇಂದ್ರನಿಗೆ ಮೀಸೆ ಬಳಿಯುವ ಉದ್ದೇಶವೇನು? ದೇವೆಂದ್ರ ಸ್ವರ್ಗ ಲೋಕದ ಅಧಿಪತಿ. ಸ್ವರ್ಗದ ಆಢಳಿತ ನಡೆಸುವವನು ರಾಜನಾದುದರಿಂದ ರಾಜವೇಶದಲ್ಲೇ ದೇವೇಂದ್ರ ರಂಗವನ್ನೇರಬೇಕು. ದೇವೇಂದ್ರನ ವೇಷ ಮಾತ್ರವಲ್ಲ ಕಿರೀಟ ತೊಟ್ಟ ಪರಂಪರೆಯ ಶ್ರೀ ರಾಮನ ವೇಷವೂ ರಾಜವೇಷದೊಂದಿಗೆ ಮೀಸೆಯೂ ಇರುತ್ತದೆ. ಯಕ್ಷಗಾನದಲ್ಲಿ ರಾಜವೇಷದ ಮಹತ್ವವೇನು? ಪುಂಡುವೇಷದ ವೈಶಿಷ್ಟ್ಯವೇನು? ಇದು ಸರಳವಾಗಿ ವೇದ್ಯವಾಗಬೇಕು. ಮಾತ್ರವಲ್ಲ ವೇಷಧಾರಿಯನ್ನು ಮತ್ತು ಸಂದರ್ಭಗಳನ್ನು ಹೊಂದಿಕೊಂಡು ವೇಷಗಾರಿಕೆ ಬಹಳಷ್ಟು ವೆತ್ಯಾಸಗಳನ್ನು ಹೊಂದಿರುತ್ತದೆ. ಒಡ್ಡೋಲಗದ ವೇಷದ ವೈವಿಧ್ಯವೇ ಒಂದು ಅಧ್ಯಯನದ ವಸ್ತುವಾಗಬಲ್ಲುದು.

ಸಾಮಾನ್ಯವಾಗಿ ಸೌಮ್ಯ ಪಾತ್ರಗಳೇ ಒಡ್ಡೋಲಗದ ವೇಷಗಳಾಗುತ್ತವೆ. ಆದರೂ ಹಲವು ಸಲ ವಿರಳವಾಗಿ ಅಸುರ ಪಾತ್ರಗಳೂ ಒಡ್ಡೋಲಗವಾಗುವುದು ಕಂಡುಬರುತ್ತದೆ. ಇದು ಪರಂಪರೆಯನ್ನು ಬಿಟ್ಟು ಬಳಸಲ್ಪಡುವ ಸನ್ನಿವೇಶಗಳು. “ರಾವಣ ವೇದಾವತಿ” ಪ್ರಸಂಗದಲ್ಲಿ ರಾವಣನ ಒಡ್ಡೋಲಗವನ್ನೇ ಕಾಣಬಹುದು. ಅದು ಪ್ರಸಂಗದ ರೀತ್ಯಾ ಅಲ್ಲದೇ ಇದ್ದು ಕೇವಲ ವಿಶೇಷ ಸನ್ನಿವೇಷವನ್ನಷ್ಟೆ ಗುರಿಯಾಗಿಸಿ ಪ್ರಸಂಗ ಪ್ರದರ್ಶಿಸಲ್ಪಟ್ಟಿತ್ತು ಎಂದು ನನ್ನ ಊಹೆ.

ಒಂದು ಪ್ರದರ್ಶನದಿಂದ ಯಕ್ಷಗಾನದ ವೇಷವನ್ನೋ ಕುಣಿತವನ್ನೋ ಕಂಡು ಕೇವಲ ಅಷ್ಟಕ್ಕೇ ಅದನ್ನು ಸೀಮಿತಗೊಳಿಸುವ ಹಾಗಿಲ್ಲ. ಪ್ರತಿಯೊಂದು ಪಾತ್ರಗಳು ಅವುಗಳ ಹಿನ್ನೆಲೆ ಅವುಗಳು ರಂಗದಲ್ಲಿ ತೆರೆದುಕೊಳ್ಳುವ ರೀತಿ, ಸಾಂದರ್ಭಿಕ ಪ್ರಯೋಗಗಳು ಇವನ್ನೆಲ್ಲ ಬೇರೆ ಬೇರೆ ದೃಷ್ಟಿಕೋನದಲ್ಲಿ ಗಮನಿಸುತ್ತಾ ಹೋದರೆ ಯಕ್ಷಗಾನ ವಿಪುಲವಾದ ಸಾಹಿತ್ಯದ ಆಕರವಾಗಿಬಿಡುತ್ತದೆ. ಒಂದು ಆಟ ನೋಡಿ ರಂಜನೆಯ ಮಟ್ಟವನ್ನಷ್ಟೆ ಅಳದು ಸುಮ್ಮನಾಗುವುದನ್ನು ಕಾಣುತ್ತೇವೆ. ಇನ್ನು ಬಹಳಷ್ಟು ಸಂದರ್ಭಗಳಲ್ಲಿ ಕಲಾವಿದರಿಗೆ ಕೈಗೆ ಸಂಭಾವನೆ ಸಿಗುವ ತನಕ ಅದೊಂದು ಯಾಂತ್ರಿಕ ಪ್ರಕ್ರಿಯೆಯಾಗಿರುತ್ತದೆ. ಕೆಲವು ಕಲಾವಿದರನ್ನು ಬಿಟ್ಟರೆ ವಸ್ತು ನಿಷ್ಠ ವಿಮರ್ಶೆಗೆ ತೆರೆದುಕೊಳ್ಳುವವರು ಬಹಳ ಕಡಿಮೆ. ಹಲವು ಸಲ ಇದು ಉದರನಿಮಿತ್ತಂ ವೇಷವಾಗುತ್ತದೆಯೇ ಹೊರತು ಇದು ಯಕ್ಷಗಾನದ ವೇಷವಾಗುವುದೇ ಇಲ್ಲ.

ಯಕ್ಷಗಾನ ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿ ಗಮನಿಸುತ್ತಾ ಹೋದರೆ ಅದರೊಳಗೆ ತೆರೆದುಕೊಳ್ಳುವ ಲೋಕ ಬಹಳ ವಿಶಾಲವಾಗಿರುತ್ತದೆ. ಅದು ಕೇವಲ ರಂಗಸ್ಥಳದ ಮೇಲಿನ ಆಸ್ವಾದನೆಗಷ್ಟೆ ಸೀಮಿತವಾಗಿಲ್ಲ. ಸುಲಭದಲ್ಲಿ ವ್ಯಕ್ತವಾಗದ ಹಲವು ವಿಷಯಗಳಿವೆ ಎಂದನಿಸುತ್ತದೆ.



ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ